ತೂನಗೆಣಸು-
ಡೈಯೊಸ್ಕೋರಿಯೋಸೀ ಕುಟುಂಬಕ್ಕೆ ಸೇರಿದ ಒಂದು ಬಳ್ಳಿ. ಶಾಸ್ತ್ರೀಯ ನಾಮ ಡೈಯೊಸ್ಕೋರಿಯ ಏಲೇಟ. ಭಾರತದಲ್ಲಿ ಎಲ್ಲಿಯೂ ಕಾಡು ಬೆಳೆಯಾಗಿ ಕಂಡುಬರುವುದಿಲ್ಲ. ಆದರೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ನೆಲದಡಿಯಲ್ಲಿ ಬೇರುಗಳಲ್ಲಿ ಗಡ್ಡೆಗಳ ರೂಪದಲ್ಲಿ ಆಹಾರ ಸಂಗ್ರಹಿಸಿಡುತ್ತದೆ. ಈ ಗೆಡ್ಡೆಗಳಿಗಾಗಿ ಇದನ್ನು ಭಾರತದ ಹಲವಾರು ಪ್ರದೇಶಗಳಲ್ಲಿ ಬೆಳೆಸುತ್ತಾರೆ. ಇದು ಮೂಲತ: ಉಷ್ಣವಲಯದ ಬೆಳೆ.

ತೂನಗೆಣಸಿನ ಬಳ್ಳಿ ಇತರ ಮರಗಿಡಗಳಿಗೆ ಅಪ್ರದಕ್ಷಿಣ ರೀತಿಯಲ್ಲಿ ಸುತ್ತಿಕೊಂಡು ಬೆಳೆಯುತ್ತದೆ. ಇದರ ಕಾಂಡ ನುಣುಪು. ಅದರ ಮೇಲೆ ತೆಳುವಾದ ರೆಕ್ಕೆಗಳಂಥ ರಚನೆಯುಂಟು. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇದೊಂದು ಏಕದಳ ಸಸ್ಯವಾದರೂ ಇದರ ನಾಳಗಳ ಸಮೂಹ ದ್ವಿದಳ ಸಸ್ಯಗಳಲ್ಲಿರುವಂತೆ ಬಲೆಯ ರೂಪದಲ್ಲಿದೆ. ಮಳೆಗಾಲದ ಕೊನೆಯಲ್ಲಿ ಈ ಸಸ್ಯ ಹೂ ಬಿಡುತ್ತದೆ. ಹೂಗಳು ಕದಿರುಗೊಂಚಲು ರೀತಿಯ ಹೂಗೊಂಚಲುಗಳಲ್ಲಿ ಎಲೆಗಳ ಕಂಕುಳಲ್ಲಿ ಅರಳುವುವು. ಗಂಡುಹೂಗಳಲ್ಲಿ 6 ಸಂಯುಕ್ತ ದಳಗಳೂ 6 ಕೇಸರಗಳೂ ಇವೆ. ಹೆಣ್ಣು ಹೂಗಳಲ್ಲ್ಲೂ 6 ಸಂಯುಕ್ತದಳಗಳು ಇವೆ. ಅಲ್ಲದೇ ಮೂರು ಕಾರ್ಪೆಲ್‍ಗಳಿಂದ ಕೂಡಿರುವ ಮೂರು ಕೋಣೆಗಳುಳ್ಳ ನೀಚಸ್ಥಾನದ ಅಂಡಾಶಯವಿದೆ. ಪ್ರತಿಕೋಣೆಯಲ್ಲೂ ಎರಡು ಅಂಡಕಗಳುಂಟು. ಫಲ ಚಪ್ಪಟೆಯಾದ 3 ಹಾಲೆಗಳಿಂದ ಕೂಡಿದ ಸಂಪುಟ ಮಾದರಿಯದು. ಬೀಜದ ಸುತ್ತ ಪೊರೆಯಂಥ ರೆಕ್ಕೆ ಇದೆ.

ಬಳ್ಳಿಯ ಬುಡದಲ್ಲಿ ಸಾಮಾನ್ಯವಾಗಿ 2-5 ಗೆಡ್ಡೆಗಳು ಬೆಳೆಯುತ್ತವೆ. ಪ್ರತಿ ಗೆಡ್ಡಯೂ ಉರುಟು ಮತ್ತು ಉದ್ದವಾಗಿ ಇದೆ. ಇದರ, ಉದ್ದ 2', ದಪ್ಪ 8". ಗೆಡ್ಡೆಯಬಣ್ಣ ಕಂದು. ಕೆಲವು ಸಲ ಗೆಡ್ಡೆಗಳು8' ಉದ್ದವಿದ್ದು100 ಪೌಂಡು ತೂಕವಿರುವುದುಂಟು. ಬಳ್ಳಿಯ ಬುಡದಲ್ಲದೇ ಮೇಲೆ ಸಹ ಎಲೆಗಳ ಕಂಕುಳಲ್ಲಿ ಚಿಕ್ಕ ಗೆಡ್ಡೆಯನ್ನು ಕಾಣಬಹುದು. ಅಲ್ಲದೇ ಕಾಂಡ ನೆಲಕ್ಕೆ ತಾಗಿಕೊಂಡಿರುವ ಕಡೆÀಗಳಲ್ಲೂ ಗೆಡ್ಡೆಗಳು ಬೆಳೆಯುತ್ತವೆ. ಎಲೆಗಳ ಕಂಕುಳಲ್ಲಿ ಬೆಳೆಯುವ ಗೆಡ್ಡೆಗಳಿಂದ ಅಥವಾ ನೆಲದಡಿಯಗೆಡ್ಡೆಗಳ ಕಣ್ಣಿನಂಥ ಭಾಗಗಳಿಂದ ಹೊಸಗಿಡಗಳನ್ನು ಬೆಳೆಸುತ್ತಾರೆ.

ತೂನಗೆಣಸಿನಲ್ಲಿ ಆಹಾರ ಪಿಷ್ಟದ ರೂಪದಲ್ಲಿದೆ. ಗೆಡ್ಡಗಳನ್ನು ಬೇಯಿಸಿ, ತರಕಾರಿಯಂತೆಯೊ ಇಲ್ಲವೆ ಹಿಟ್ಟನ್ನು ತಯಾರಿಸಿ, ಆಹಾರವಾಗಿಯೋ ಉಪಯೋಗಿಸಬಹುದು. ತೂನಗೆಣಸು ರುಚಿಕರವಷ್ಟೇ ಅಲ್ಲ ಪುಷ್ಟಿದಾಯಕವೂ ಹೌದು. ದಕ್ಷಿಣ ಅಮೆರಿಕ, ವೆಸ್ಟ್ ಇಂಡೀಸ್ ಮತ್ತು ಏಷ್ಯ ಖಂಡದ ಉಷ್ಣಪ್ರದೇಶಗಳ ಜನರಿಗೆ ಇದು ಒಂದು ಮುಖ್ಯ ಆಹಾರವಾಗಿದೆ.

ತೂನಗೆಣಸಿನ ಗೆಡ್ಡೆಗಳನ್ನು ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ ಯಾಮ್ ಎನ್ನುತ್ತಾರೆ. ಇವುಗಳಲ್ಲಿ ಡೈಯೊಸ್ಕೋರಿಯ ಗ್ಲೋಬೋಸ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಡೈಯೋಸ್ಕೋರಿಯ ಏಲೇಟ ಎರಡನೆಯ ದರ್ಜೆಯದು. ಇದಕ್ಕೆ ಬಿಳಿ ಯಾಮ್ ಎಂಬ ಹೆಸರು ಇದೆ.

(ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ